ಪಿರಮಿಡ್ಡುಗಳು
ವಾಸ್ತುಶಿಲ್ಪದಲ್ಲಿ ಕಲ್ಲು ಅಥವಾ ಇಟ್ಟಿಗೆಗಳನ್ನು ಬಳಸಿ ನಿರ್ಮಿಸಿದ ಪಂಚಮುಖ ಘನಾಕೃತಿಯ ಭವ್ಯ ಕಟ್ಟಡಗಳು. ಪಿರಮಿಡ್ಡಿನಲ್ಲಿ ಆಯಾಕಾರದ ಅಡಿಪಾಯವಿದ್ದು, ಒಂದು ಮುಖ ಮತ್ತು ಇಳಿಜಾರಾದ ತ್ರಿಕೋಣಾಕಾರದ ನಾಲ್ಕು ಮುಖಗಳು ಕಟ್ಟಡದ ತುದಿಯಲ್ಲಿ ಒಂದು ಬಿಂದುವಿನಲ್ಲಿ ಕೂಡುವುವು. ಸರಳವಾಗಿ ಹೇಳುವುದಾದರೆ ಪಿರಮಿಡ್ಡು ಕಲ್ಲಿನಲ್ಲಿ ನಿರ್ಮಿಸಿದ್ದಾದರೂ ಅದರ ಆಕಾರ ಮರಳುರಾಶಿಯಂತಿರುತ್ತದೆ. ಪಿರಮಿಡ್ಡು ಎಂದ ಕೂಡಲೇ ಪ್ರಾಚೀನ ಈಜಿಪ್ಟಿನ ಭವ್ಯ ರಾಜರ ಸಮಾಧಿಗಳು ನೆನಪಿಗೆ ಬರುತ್ತವೆ. ಈಜಿಪ್ಟ್, ಸೂಡಾನ್, ಈತಿಯೋಪಿಯ, ಮೆಕ್ಸಿಕೊ ಮೊದಲಾದ ಪ್ರಪಂಚದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಕಾಲಗಳಲ್ಲಿ ಇವುಗಳ ನಿರ್ಮಾಣವಾಗಿದ್ದರೂ ಪ್ರಾಚೀನ ಈಜಿಪ್ಟಿನ ಅರಸರ ಸಮಾಧಿಗಳಿಗೆ ನಿರ್ಮಿಸಿದ ಪಿರಮಿಡ್ಡುಗಳ ಪ್ರಪಂಚದ ಏಳು ಅದ್ಭುತಗಳಲ್ಲಿ ಸೇರಿ ಪ್ರಸಿದ್ಧವೆನಿಸಿವೆ. 

	ಪ್ರಾಚೀನ ಈಜಿಪ್ಟಿನ ಭಾಷೆಯಲ್ಲಿ ಪಿರಮಿಡ್ಡಿಗೆ ಮೇರ್ ಎಂಬ ಪದ ಬಳಕೆಯಲ್ಲಿತ್ತು. ಗ್ರೀಕ್ ಭಾಷೆಯಲ್ಲಿ ಬಹುವಚನ ರೂಪದ ಪಿರಮಿಡೀಸ್ ಎಂಬ ಪದ ಇದೆ. ಅದಕ್ಕೆ ಪಿರಾಮಿಡ್ಡಿನ ಎತ್ತರವನ್ನು ಸೂಚಿಸುವ ಅರ್ಥವಿದೆ. ಈಜಿಪ್ಟಿನ ಪಿರಮಿಡ್ಡುಗಳು ಪ್ರಾಚೀನ ರಾಜವಂಶಗಳ ಕಾಲಕ್ಕೆ ಅಂದರೆ ಮೂರನೆಯ ರಾಜಮನೆತನದಿಂದ ಟಾಲೆಮಿ ದೊರೆಗಳ ಆಳ್ವಿಕೆ ಕಾಲದವರೆಗೂ ಅಂದರೆ ಸುಮಾರು 2700 ವರ್ಷಗಳಷ್ಟು ಕಾಲ ನಿರ್ಮಿತವಾಗುತ್ತಿದ್ದರೂ ಅವುಗಳ ಉಚ್ಛ್ರಾಯ ಕಾಲವೆಂದರೆ 4 ನೆಯ ರಾಜ ಮನೆತನದ ಕಾಲ (ಕ್ರಿ.ಪೂ. 2700-2560). ಕ್ರಿ. ಪೂ. 5 ನೆಯ ಶತಮಾನದಲ್ಲಿ ಗ್ರೀಕ್ ಇತಿಹಾಸಕಾರ ಹೀರಡಟಸ್ ತನ್ನ ವರ್ಣನೆಯಿಂದ ಈಜಿಪ್ಟಿನ, ಅದರಲ್ಲೂ 4 ರಾಜವಂಶಗಳ, ಕುಪು, ಖಾಫ್ರೆ ಮತ್ತು ಮೆನ್‍ಕುರೆ ದೊರೆಗಳ ಗೀಜಾ ಬಳಿಯಿರುವ ಮೂರು ಪಿರಮಿಡ್ಡುಗಳನ್ನು ಜಗತ್ಪ್ರಸಿದ್ಧವಾಗುವಂತೆ ಮಾಡಿದ್ದಾನೆ. ಅತ್ಯಂತ ದೊಡ್ಡದಾದ ಮತ್ತು ಪ್ರಾಚೀನವಾದ ಮೂರು ಪಿರಮಿಡ್ಡುಗಳು ಒಂದೇ ಸ್ಥಳದಲ್ಲಿ ನಿರ್ಮಾಣವಾಗಿರುವುದು ಇವುಗಳ ಪ್ರಸಿದ್ಧಿಗೆ ಮುಖ್ಯ ಕಾರಣ. ಗೀಜಾ ಪಿರಮಿಡ್ಡುಗಳು ಫ್ಯಾರೋ ದೊರೆಗಳ ಭವ್ಯತೆ ಮತ್ತು ಶಕ್ತಿ ಸಾಹಸಗಳ ಕುರುಹುಗಳೆಂದು ಪರಿಗಣಿಸಲಾಗಿವೆ. ಈಚಿನ ಕಾಲದಲ್ಲಿ ಪಿರಾಮಿಡ್ಡುಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಿದುದೇ ಅಲ್ಲದೆ, ಕುಫುವಿನ ಬೃಹತ್ ಪಿರಾಮಿಡ್ಡಿನ ಯಂತ್ರಶಿಲ್ಪಿಕ ವಿವರಗಳನ್ನು ಒದಗಿಸಿದ ಕೀರ್ತಿ 1880-82 ನಡುವೆ ಸಂಶೋಧನೆ ಮಾಡಿದ ಸರ್ ಫ್ಲಿಂಡರ್ಸ್ ಪೆಟ್ರಿಗೆ ಸಲ್ಲುತ್ತದೆ. ಪಿರಮಿಡ್ಡುಗಳ ರಚನಾತಂತ್ರಗಳ, ಅವುಗಳ ಉದ್ದೇಶಗಳ ಬಗೆಗೂ ಅನೇಕ ಸಂಗತಿಗಳನ್ನು ತಿಳಿಸಿದ್ದಾನೆ. ಈತನ ಗ್ರಂಥ ದಿ ಪಿರಮಿಡ್ಸ್ ಅಂಡ್ ಟೆಂಪಲ್ಸ್ ಆಫ್ ಈಜಿಪ್ಟ್ ಒಂದು ಉತ್ತಮ ಗ್ರಂಥ. ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ನಡೆಸಿದ ಐ.ಇ.ಎಸ್. ಎಡ್ವಡ್ರ್ಸನ ದಿ ಪಿರಮಿಡ್ಸ್ ಆಫ್ ಈಜಿಪ್ಟ್ ಮತ್ತೊಂದು ಉತ್ತಮ ಗ್ರಂಥ. (1947).

	ಅನೇಕ ಪಿರಮಿಡ್ಡುಗಳು ಈಗ ಸಂಪೂರ್ಣವಾಗಿ ನಾಶವಾಗಿ ಹೋಗಿವೆ. ಅವುಗಳಲ್ಲಿ ಹೂತಿಟ್ಟಿದ್ದ ಚಿನ್ನ ವಜ್ರ ರತ್ನಗಳ ಸಂಪತ್ತನ್ನು ಲೂಟಿ ಮಾಡುವ ಪ್ರವೃತ್ತಿ ಪಿರಮಿಡ್ಡುಗಳ ನಿರ್ಮಾಣ ಕಾಲದಲ್ಲೇ ಪ್ರಾರಂಭವಾಗಿತ್ತು. ಈಚಿನ ಕಾಲದಲ್ಲಿ ಅವುಗಳ ನಿರ್ಮಾಣಕ್ಕಾಗಿ ಬಳಸಿದ ಕಲ್ಲುಗಳನ್ನು ಕಿತ್ತು ಆಧುನಿಕ ನಗರಗಳನ್ನು ನಿರ್ಮಿಸಲು ಬಳಸಲಾಗುತ್ತಿದೆ. ಪ್ರಾಚೀನ ಮೆಂಫಿಸ್ ಅಥವಾ ಆಧುನಿಕ ಕೈರೋ ಸನಿಯದಿಂದ ಹಿಡಿದು ದಕ್ಷಿಣದಲ್ಲಿದ್ದ ತೀಬ್ಸ್ ನಗರ ನಿವೇಶನದವರೆಗೂ ಅಂದರೆ ಸುಮಾರು 800 ಕಿ.ಮೀ. ಪ್ರದೇಶದಲ್ಲಿ ವಿವಿಧ ಪ್ರಮಾಣದ ನೂರಾರು ಪಿರಮಿಡ್ಡುಗಳು ಉಳಿದು ಬಂದಿವೆ. ಮೊದಲ ಕಾಲದ ಪಿರಮಿಡ್ಡಗಳು ರಾಜರ ಸಮಾಧಿಗಳಾಗಿದ್ದವು. ಅನಂತರದ ಕಾಲದಲ್ಲಿ ಉಚ್ಚ ರಾಜಕೀಯ ವ್ಯಕ್ತಿಗಳು, ಶ್ರೀಮಂತರೂ ತಮ್ಮ ಮರಣೋತ್ತರ ವಸತಿಗಾಗಿ ಸಣ್ಣ ಪ್ರಮಾಣದ ಪಿರಮಿಡ್ಡುಗಳನ್ನು ನಿರ್ಮಿಸುತ್ತಿದ್ದರೆಂದು ತಿಳಿದುಬರುತ್ತದೆ. ಮೃತರ ಶರೀರವನ್ನು ನಷ್ಟವಾಗದಂತೆ ಸಂರಕ್ಷಿಸಿಡದಿದ್ದರೆ ಪ್ರೇತ ಲೋಕದಲ್ಲಿ ಅವರ ಆತ್ಮ ಉಳಿಯುವುದಿಲ್ಲವೆಂಬ ಈಜಿಪ್ಟಿನ ಜನರ ನಂಬಿಕೆಗನುಸಾರವಾಗಿ ಅರಸರ, ಶ್ರೀಮಂತ ವರ್ಗದವರ ಮೃತ ದೇಹಗಳನ್ನು ಈ ಪಿರಮಿಡ್ಡುಗಳಲ್ಲಿ ಸುಭದ್ರವಾಗಿ ಇಡಲಾಗುತ್ತಿತ್ತು. ದೇಹವನ್ನು ಪಿರಮಿಡ್ಡಿನೊಳಗಿನ ಸಮಾಧಿ ಕೋಣೆಯಲ್ಲೋ ಅಥವಾ ಅದರ ಅದರ ಕೆಳಗಡೆ ಕಲ್ಲಿನಲ್ಲಿ ಕೊರೆದ ಕೋಣೆಯಲ್ಲೋ ಹುಗಿದಿಡಲಾಗುತ್ತಿತ್ತು.

	ಪ್ರಾಚೀನ ರಾಜವಂಶಗಳ ಕಾಲದಲ್ಲಿ (ಕ್ರಿ.ಪೂ. 2700-2300) ಪಿರಮಿಡ್ಡಿನ ಘಟಕಗಳು ಹೀಗಿರುತ್ತಿದ್ದುವು ; 1.ಸಮಾಧಿಯ ಮೇಲೆ ಕಟ್ಟಿದ ಅಥವಾ ಸಮಾಧಿಯನ್ನೊಳಗೊಂಡ ಪಿರಮಿಡ್ಡು, 2.ಎತ್ತರವಾದ ಪ್ರದೇಶದಲ್ಲಿ ನಿಂತಿರುವ ಪಿರಮಿಡ್ಡನ್ನು ಆವರಿಸಿದ ವಿಶಾಲ ಪ್ರಾಂಗಣ, 3. ಅದಕ್ಕೆ ಹೊಂದಿದಂತೆ ಕಟ್ಟಲಾದ ಶವಮಂದಿರ, 4. ಶವಮಂದಿರದಿಂದ ನದಿ ದಂಡೆಯವರೆಗೆ ಹೋಗುವ ಆವೃತ ಮಾರ್ಗ ಮತ್ತು 5. ನದಿಯ ದಂಡೆಯಲ್ಲಿ ನಿರ್ಮಿತವಾದ ಬಲಿ ಮಂಟಪ. ಈ ಸಾಧಾರಣ ಅಂಶಗಳಲ್ಲದೇ ಮಹತ್ವಪೂರ್ಣ ಪಿರಮಿಡ್ಡುಗಳಲ್ಲಿ ಕೆಲವು ಹೆಚ್ಚಿನ ಘಟಕಗಳನ್ನು ಕಾಣಬಹುದು. ಕುಫುವಿನ ಪಿರಮಿಡ್ಡಿನ ಸುತ್ತ ರಾಜಮನತನದವರ ಸಣ್ಣ ಪ್ರಮಾಣದ ಪಿರಮಿಡ್ಡುಗಳು, ಶ್ರೀಮಂತ ವರ್ಗದವರ ಮಸ್ರಾಬ ಗೋರಿಗಳು ಅಧಿಕ ಸಂಖ್ಯೆಯಲ್ಲಿವೆ. 1954 ರಲ್ಲಿ ಬೆಳಕಿಗೆ ಬಂದ ರಾಜನ ದೇಹವನ್ನು ಅವನ ಪಿತೃ ರಾ ದೇವತೆಯ ಲೋಕಕ್ಕೆ ಸಾಗಿಸಲು ಬಳಸಲಾಗುತ್ತಿತ್ತೆಂದು ನಂಬಲಾದ ಸೌರ ದೋಣಿ ಇಲ್ಲಿನ ಒಂದು ವಿಶಿಷ್ಟಾಂಶವಾಗಿದೆ. ಖಾಫ್ರೆ ಪಿರಮಿಡ್ಡಿನ ಆವೃತ ಮಾರ್ಗದ ಬದಿಯಲ್ಲಿ ಬೃಹದಾಕಾರದ ಅವನ ಸ್ಪಿಂಗ್ಸ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇದೊಂದು ಘನತೆ ಗಾಂಭೀರ್ಯ ಕೂಡಿದ, ಶಿಲ್ಪ ಕೌಶಲದಲ್ಲಿ ಅಮೋಘವಾದ, ಸುಂದರ ಕೃತಿ.

	ಪಿರಮಿಡ್ಡುಗಳ ನಿರ್ಮಾಣದ ಉದ್ದೇಶದ ಬಗ್ಗೆ ಹಲವಾರು ವಾದಗಳಿವೆ. ಸರಳವಾದ ಅಭಿಪ್ರಾಯವೆಂದರೆ ಅರಸನ ಮರಣೋತ್ತರ ವಸತಿಗಾಗಿ ಭವ್ಯ ಮಂದಿರವನ್ನು ನಿರ್ಮಿಸುವುದು. ಆದರೆ ಇಷ್ಟು ಬೃಹತ್ತಾದ, ಶ್ರಮ ಪೂರ್ಣವಾದ ಕಟ್ಟಡಕ್ಕೆ ಬೇರೆ ಉದ್ದೇಶವಿದ್ದಿರಬೇಕು. ಮತೀಯ ನಂಬಿಕೆಗನುಗುಣವಾಗಿ ಇದನ್ನು ನಿರ್ಮಿಸಲಾಯಿತೆಂಬ ವಾದವೂ ಸಮಂಜಸವಾಗಿಲ್ಲ. ಇವು ಬೃಹತ್ತಾದ, ನಕ್ಷತ್ರ ಹಾಗೂ ಆಕಾಶ ವೀಕ್ಷಣಾಲಯಗಳಾಗಿದ್ದವೆಂಬ ವಾದಕ್ಕೂ ಹೆಚ್ಚಿನ ಮಹತ್ವ ನೀಡಲಾಗುವುದಿಲ್ಲ. ಐ.ಇ.ಎಸ್. ಎಡ್ವರ್ಡ್ ಹೇಳುವಂತೆ ಈಜಿಪ್ಟಿನ ಮುಖ್ಯ ದೇವತೆ ಸೂರ್ಯನ ಲೋಕ ಅಂತರಿಕ್ಷಕ್ಕೆ ಹೋಗುವ ಮೆಟ್ಟಿಲುಗಳ ಶ್ರೇಣಿಯೆಂಬ ಅಭಿಪ್ರಾಯಕ್ಕೆ ಸಕ್ಕಾರಾದ ಮೆಟ್ಟಿಲು ಪಿರಮಿಡ್ಡು ಸಾಧಕವಾಗಿದೆ. ನಿಜವಾದ ಪಿರಮಿಡ್ಡಿನಾಕಾರ ಆಕಾಶದಿಂದ ಭೂಮಿಗೆ ಬರುವ ಸೂರ್ಯನ ರಶ್ಮಿಯ ಪ್ರತೀಕವೆಂಬ ವಾದ ಸದ್ಯಕ್ಕೆ ವಿಶ್ವಸನೀಯವಾಗಿ ಕಾಣುತ್ತದೆ. 

	ಪಿರಮಿಡ್ಡುಗಳ ಉಗಮದ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲವಾದರೂ ಪ್ರಾಚೀನ ಕಾಲದಿಂದಲೂ ಅಲ್ಲಿ ರೂಢಿಯಲ್ಲಿದ್ದ ಸಮಾಧಿಗಳನ್ನು ಸಂಶೋಧಿಸಿದ ವಿದ್ವಾಂಸರ ಅಭಿಪ್ರಾಯ ವಿಶ್ವಾಸನೀಯ. ರಾಜ ಮನೆತನಗಳ ಆರಂಭ ಕಾಲದಲ್ಲಿ ಅಂದರೆ ಮೊದಲನೆಯ ರಾಜವಂಶದ ಕಾಲದಲ್ಲಿ ಅರಸರ ಶ್ರೀಮಂತರ ಶವಗಳನ್ನು ಮಸ್ತಾಬ ಗೋರಿಗಳಲ್ಲಿ ಹುಗಿಯುತ್ತಿದ್ದರು. ಭಾಗಶಃ ಭೂಮಿಯೊಳಗೂ ಭಾಗಶಃ ಭೂಮಿಯ ಮೇಲೂ ಇರುತ್ತಿದ್ದ ಈ ಮಸ್ತಾಬ ಗೋರಿ ಆಯಾಕಾರದ ಮೇಜಿನಂತೆ ಅಥವಾ ವಿಶಾಲವಾದ ಜಗಲಿಯಂತೆ ಇರುತ್ತಿತ್ತು. ಮೂರನೆಯ ರಾಜವಂಶದ ಜೋಸರ್ ದೊರೆ ಮಹತ್ವಾಕಾಂಕ್ಷಿಯಾಗಿ ತನ್ನ ವಾಸ್ತುಶಾಸ್ತ್ರಜ್ಞ ಇಮ್‍ಹೋಟೆಪ್‍ನ ನೇತೃತ್ವದಲ್ಲಿ ದೊಡ್ಡ ಮಸ್ತಾಬವನ್ನು ನಿರ್ಮಿಸತೊಡಗಿದ. ಇಡಿ ಮಸ್ತಾಬವನ್ನು ಕಲ್ಲಿನಲ್ಲಿ ನಿರ್ಮಿಸಿದ್ದುದಲ್ಲದೇ ಅದರ ಮಹತ್ವವನ್ನು ಹೆಚ್ಚಿಸಲು ಕ್ರಮೇಣ ಸಣ್ಣದಾಗುವ, ಚೌಕಾಕಾರದ ಮಸ್ತಾಬಗಳನ್ನು ಒಂದರ ಮೇಲೊಂದರಂತೆ ನಿರ್ಮಿಸಲಾಯಿತು. ಮೂಲ ಮಸ್ತಾಬ 205 ಅಡಿ ಉದ್ದಗಲ ಮತ್ತು 276 ಅಡಿ ಎತ್ತರವಿತ್ತು. ಅದರ ಸುತ್ತಲೂ ಇನ್ನಿತರ ಅನುಷಂಗಿಕ ಕಟ್ಟಡಗಳನ್ನು ಸೇರಿಸಲಾಯಿತು. ಅದರ ಎತ್ತರವನ್ನು ಹೆಚ್ಚಿಸಲು ಕ್ರಮೇಣ ಕಿರಿದಾಗುವ ಚೌಕಾಕಾರದ ಆರು ಮಸ್ತಾಬಗಳನ್ನು ಅದರ ಮೇಲೆ ನಿರ್ಮಿಸಲಾಯಿತು. ಅಂತ್ಯಾವಸ್ಥೆಯಲ್ಲಿ ಅದು 396 + 356 ಅಡಿಗಳ ವಿಸ್ತೀರ್ಣ ಮತ್ತು 1986 ಅಡಿಗಳೆತ್ತರವಿತ್ತು. ಸಕ್ಕಾರಾ ಎಂಬಲ್ಲಿರುವ ಈ ಕಟ್ಟಡವನ್ನು ಜೊóೀಸರನ ಮೆಟ್ಟಿಲು ಪಿರಮಿಡ್ ಎಂದು ಕರೆಯಲಾಗಿದೆ. ಪಿರಮಿಡ್ಡಿನ ಭೂಗತ ಭಾಗದಲ್ಲಿ ಅತಿ ತೊಡಕಾದ ಮೊಗಸಾಲೆಗಳೂ ಮತ್ತು ಕೋಣೆಗಳೂ ಇವೆ. ಮಧ್ಯಭಾಗದ ಕೊಳವೆಗಂಬ 816 ಅಡಿ ಆಳವಾಗಿಯೂ 266 ಅಡಿ ಅಗಲವಾಗಿಯೂ ಇದೆ. ಅದರ ಕೆಳತುದಿಯಲ್ಲಿ ಶವಕೋಣೆ ಇದೆ. ಪಿರಮಿಡ್ಡಿನ ಸುತ್ತಲ 895 ಘಿ 914 ಅಡಿಗಳ ವಿಸ್ತೀರ್ಣದ ಪ್ರಾಂಗಣದಲ್ಲಿ ಅರಸನ ಮರಣೋತ್ತರ ಕಾಲದ ಅವಶ್ಯಕತೆಗಳನ್ನು ಪೂರೈಸಲು ಬೇಕಾದ ಸಣ್ಣ ಕಟ್ಟಡಗಳ ಅವಶೇಷಗಳಿವೆ. ಸಕ್ಕಾರಾದಿಂದ ಅನತಿ ದೂರದಲ್ಲಿರುವ ದಷ್ಷೂರ್ ಎಂಬಲ್ಲಿರುವ ಭಾಗದ ಪಿರಮಿಡ್ಡು ಮುಂದಿನ ಹಂತವನ್ನು ಪ್ರತಿನಿಧಿಸುತ್ತದೆ. 4 ನೆಯ ರಾಜವಂಶದ ಸ್ನೆಫೆರು ಅರಸನಿಂದ ಕಟ್ಟಿಸಲಾದ ಈ ಪಿರಮಿಡ್ಡಿನ ಆಸ್ತಿವಾರ 620 ಅಡಿ. ಚಚ್ಚೌಕನಾಗಿದ್ದು 2231/2 ಅಡಿ ಎತ್ತರ ಇದೆ. ಈ ಕಟ್ಟಡದ ವೈಶಿಷ್ಟ್ಯವೆಂದರೆ ಅದರ ಎತ್ತರದ ಮಧ್ಯಭಾಗದವರೆಗೂ ಇಳಿಜಾರು ಕಡಿದಾಗಿದ್ದು, ನೆಲಕ್ಕೆ ಹೋದಂತೆ ಹೆಚ್ಚು ಬಾಗಿದೆ. ಅದೇ ದೊರೆಯಿಂದ ನಿರ್ಮಿತವಾದ ಮೇಡುಮ್‍ನಲ್ಲಿರುವ ಮತ್ತೊಂದು ಪಿರಮಿಡ್ಡು 8 ಅಂತಸ್ತುಗಳ ಮಸ್ತಾಬಾ ಪಿರಮಿಡ್ಡಿನಾಕಾರದಲ್ಲಿ ನಿರ್ಮಿತವಾದುದಾದರೂ ಅದಕ್ಕೆ ಮೆಟ್ಟಿಲಾದ ಜಗಲಿಗಳನ್ನು ಕಲ್ಲುಗಳಿಂದ ತುಂಬಿ ಇಳಿಜಾರಾದ ಸಮತಲ ಹೊರಮೈಯನ್ನು ನಿರ್ಮಿಸಲಾಗಿದೆ. ಇದನ್ನು ನಿಜವಾದ ಪಿರಮಿಡ್ಡಿನಾಕೃತಿಯ ಮೊದಲ ಕಟ್ಟಡವೆಂದು ಹೇಳಬಹುದು. ಈ ಪಿರಮಿಡ್ಡನ್ನು ಈಜಿಪ್ಟಿನಲ್ಲಿಯೇ ಅತ್ಯಂತ ಭವ್ಯ ನಿರ್ಮಾಣವೆಂದು ಎಂ.ಎ. ಮರ್ರೆ ಅಭಿಪ್ರಾಯಪಡುತ್ತಾರೆ. ಮಾನವ ನಿರ್ಮಿತ ಜಗತ್ತಿನ ಕಟ್ಟಡಗಳಲ್ಲಿ ಇದಕ್ಕೆ ಸಮನಾದುದು ಬೇರಿಲ್ಲವಂತೆ. ಮೂರಂತಸ್ತುಗಳಿಲ್ಲ ಅದರ ಆಕೃತಿಯೇ ಅದರ ವೈಶಿಷ್ಟ್ಯ. ಅದರ ಶವಮಂದಿರದ ಘನವಾದ ಕಂಬಗಳ ಮುಂದೆ ಅದರ ಚಾವಣಿ ರಟ್ಟಿನಲ್ಲಿ ಮಾಡಿದಂತೆ ಭಾಸವಾಗುತ್ತದೆ. ಆದರೆ ಯೋಜನಾಹಂತದಿಂದ ಕಡೆಯವರೆಗೂ ನಿಜವಾದ ಪಿರಮಿಡ್ಡಿನಂತೆ ನಿರ್ಮಿಸಿದ ಪಿರಮಿಡ್ಡನ್ನು ದಷ್ಷೂರ್‍ನಲ್ಲಿರುವ ಉತ್ತರ ಶಿಲೆಯ ಪಿರಮಿಡ್ಡಿನಲ್ಲಿ ಕಾಣಬಹುದು. ಸ್ನೆಫೆರು ನಿರ್ಮಿಸಿದನೆಂದು ಹೇಳಲಾದ ಇದರ ಅಡಿಪಾಯದ ಉದ್ದಗಲ 326 ಅಡಿಗಳು ಮತ್ತು ಎತ್ತರ 343 ಅಡಿಗಳು ; ಅಂದರೆ ಸುಪ್ರಸಿದ್ಧ ಗೀಜಾದ ಪಿರಮಿಡ್ಡುಗಳ ಪ್ರಮಾಣಕ್ಕೆ ಹೆಚ್ಚುಕಡಿಮೆ ಇದು ಸರಿ ಹೋಲುತ್ತದೆ. 

	ಮುಂದಿನ ಮತ್ತು ವಿಕಾಸದ ಪರಮೋಚ್ಚ ಹಂತದ ನಿದರ್ಶನಗಳೆಂದರೆ ಕೈರೋ ನಗರದ ನೈರುತ್ಯ ದಿಕ್ಕಿನಲ್ಲಿ ಮರಳುಗಾಡಿನ ಮಧ್ಯೆ ಶಿಲಾಮಯ ಪ್ರಸ್ಥ ಭೂಮಿಯ ಮೇಲೆ ನಿರ್ಮಿತವಾಗಿರುವ ಗೀóಜಾ ಪಿರಮಿಡ್ಡುಗಳು. ಇವನ್ನು ನಾಲ್ಕನೆಯ ರಾಜ ಮನೆತನದ (ಕ್ರಿ. ಪೂ. 2720-2560) ಕುಫು (ಚಿಯೋಪ್ಸ್) ಖಾಫ್ರೆ (ಖೆಫ್ರೆನ್) ಮತ್ತು ಮೆಂಕುರೆ (ಮೈಸಿರಿನಸ್) ದೊರೆಗಳು ಕಟ್ಟಿಸಿದರು. ಇವನ್ನು ವಿಶ್ವದ ಏಳು ಪ್ರಾಚೀನ ಅದ್ಭುತಗಳಲ್ಲಿ ಹೀರಡಟಸ್ ಸೇರಿಸಿದ್ದಾನೆ. 

	ಈ ಗುಂಪಿನಲ್ಲಿ ಅತ್ಯಂತ ದೊಡ್ಡದೂ, ಪುರಾತನವೂ ಆದ ಕುಫುವಿನ ಪಿರಮಿಡ್ಡು 755' ಉದ್ದಗಲದ 13 ಎಕರೆ ವಿಸ್ತೀರ್ಣದ ಮತ್ತು 481 ಅಡಿಗಳೆತ್ತರದ ಬೃಹತ್ ನಿರ್ಮಾಣ, ಅದರ ನಿರ್ಮಾಣ ಕಾಲ ಸುಮಾರು ಕ್ರಿ.ಪೂ. 2720.  ಅದರ ಪಾಶ್ರ್ವಗಳು 510 52' ಕೋನದಲ್ಲಿವೆ. ಮತ್ತು ಪ್ರತಿ ಮೂಲೆಯೂ ದಿಕ್ಕುಗಳಿಗೆ ಸರಿಯಾಗಿವೆ. ಕಟ್ಟಡದ ಒಳಭಾಗವನ್ನು ಹಳದಿ ಬಣ್ಣದ ಸುಣ್ಣದ ಕಲ್ಲಿನ ದಿಮ್ಮಿಗಳಿಂದ ನಿರ್ಮಿಸಲಾಗಿದೆ. ಒಳಗಿನ ಮೊಗಸಾಲೆಗಳಿಗೆ ಜಬಾಲ್‍ತುರಾ ಪ್ರಾಂತ್ಯದ ಸುಣ್ಣಕಲ್ಲನ್ನು ಉಪಯೋಗಿಸಲಾಗಿದೆ. ಶವಕೋಣೆಯ ನಿರ್ಮಾಣಕ್ಕೆ ಅಸ್ವಾನ್ ಪ್ರಾಂತ್ಯದ ಗ್ರ್ಯಾನೈಟ್ ಶಿಲೆಯ ದೊಡ್ಡ ದಿಮ್ಮಿಗಳನ್ನು ಬಳಸಲಾಗಿದೆ. ಸರಾಸರಿ 21/2 ಟನ್ ತೂಕದ 23,00,000 ಕಲ್ಲು ದಿಮ್ಮಿಗಳನ್ನು ಇದರ ನಿರ್ಮಾಣಕ್ಕೆ ಬಳಸಲಾಗಿದೆ ಎಂದರೆ ಕೌಶಲ್ಯ ಮತ್ತು ಯಂತ್ರಶಾಸ್ತ್ರದ ಪ್ರಾವಿಣ್ಯಕ್ಕೆ ಈ ಕಟ್ಟಡ ಉತ್ತಮ ನಿದರ್ಶನವೆನ್ನಬಹುದು. ಅದರ ಯೋಜನೆಯ ಪರಿಪಕ್ವತೆ ಮತ್ತು ಕಲ್ಲು ಕೆಲಸದ ನಿಖರತೆ ನಿಜಕ್ಕೂ ಅದ್ಭುತವಾಗಿವೆ. ಅಷ್ಟು ಭಾರದ ಕಲ್ಲು ದಿಮ್ಮಿಗಳನ್ನು ಎತ್ತಲು (ಕೆಲವು ದಿಮ್ಮಿಗಳು 16 ಟನ್ ತೂಕದ್ದಾಗಿವೆ) ಇಳಿಜಾರಾದ ರಸ್ತೆಗಳನ್ನು ನಿರ್ಮಿಸಿದ್ದರೆಂದು ಊಹಿಸಲಾಗಿದೆ. ಅಷ್ಟು ದೊಡ್ಡ ದಿಮ್ಮಿಗಳನ್ನು ಕೂಡಿಸಿರುವ ಸಂಧಿಗಳು ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾಗಿವೆ. ಅದರ ಪಾಶ್ರ್ವಗಳೂ 759 ಅಡಿಗಳುದ್ದವಿದ್ದರೂ ವಕ್ರತೆ 1/2 ಡಿಗ್ರಿಗಳಷ್ಟೂ ಇಲ್ಲ. ಅದರ ನಾಲ್ಕು ಕೋನಗಳು ನಿರ್ದಿಷ್ಟ 900 ಗೆ ಸಮವಾಗಿವೆ. ಹೀರಡಟಸ್ಸನ ಹೇಳಿಕೆಯಂತೆ ಕಲ್ಲುದಿಮ್ಮಿಗಳನ್ನು ಪಿರಮಿಡ್ಡಿನ ನಿವೇಶನಕ್ಕೆ ಸಾಗಿಸಲು ರಸ್ತೆ ನಿರ್ಮಾಣ ಕಾರ್ಯಕ್ಕೆ 10 ವರ್ಷ ಹಿಡಿಯಿತೆಂದು ನಿರ್ಮಾಣ ಕಾರ್ಯ ಮುಗಿಸಲು ಮತ್ತೆ 20 ವರ್ಷಗಳಾದುವೆಂದೂ ತಿಳಿದುಬರುತ್ತದೆ. 1,00,000 ಜನರು ಅದರ ನಿರ್ಮಾಣಕ್ಕೆ ಶ್ರಮಿಸಿದರೆಂದು ಹೇಳಲಾಗಿದೆ.

	ಪಿರಮಿಡ್ಡಿನೊಳಕ್ಕೆ ಹೋಗುವ ಮಾರ್ಗ ಅದರ ಉತ್ತರದಿಕ್ಕಿನಲ್ಲಿ ಭೂಮಟ್ಟದಿಂದ 58 ಅಡಿಗಳೆತ್ತರದಲ್ಲಿದೆ. ಕಟ್ಟಡದೊಳಗಿನ ಇಳಿಜಾರಾದ ಮಾರ್ಗ ಒಳಕೋಣೆಗೆ ಸಾಗುತ್ತದೆ. ಆಲ್ಲಿಂದ ಮುಂದೆ ಭೂ ಮಟ್ಟದಿಂದ ತಳಕ್ಕೆ ಒಂದು ಸುರಂಗಮಾರ್ಗ ಹೋಗಿ ಒಳಗಿನ ಶವಕೋಣೆಯನ್ನು ತಲುಪುತ್ತದೆ. ಮತ್ತೊಂದು ಮಾರ್ಗ ಹೆಚ್ಚು ಕಡಿಮೆ ಸಮಾನಾಂತರವಾಗಿ ಮುನ್‍ಸಾಗಿ ರಾಣಿಯ ಕೋಣೆಯನ್ನು ತಲುಪುತ್ತದೆ. ಒಳಕೋಣೆಯಿಂದ ಮತ್ತೊಂದು ಮಾರ್ಗ ಮೇಲ್ಮುಖವಾಗಿ ಸಾಗಿ 28 ಅಡಿಗಳೆತ್ತರ ಮತ್ತು 153 ಅಡಿಗಳುದ್ದದ ಮೊಗಸಾಲೆಗೆ ಹೋಗುತ್ತದೆ. ಮೊಗಸಾಲೆಯ ತುದಿಯಲ್ಲಿ ರಾಜನ ಕೋಣೆ ಅಥವಾ ಮುಖ್ಯ ಶವಕೋಣೆ ಇದೆ. ಅದರ ಪ್ರಮಾಣ ಹೀಗಿದೆ 34' ಘಿ 17' ಘಿ 10' ರಾಜನ ಕೋಣೆ ಭೂಮಟ್ಟದಿಂದ 139 ಅಡಿಗಳೆತ್ತರದಲ್ಲಿದೆ. ಆ ಕೋಣೆಯಿಂದ ಪಿರಮಿಡ್ಡಿನ ಹೊರಕ್ಕೆ ಎರಡು ಬೆಳಕಿನ ಕೊಳವೆಕಿಂಡಿಗಳಿವೆ. ರಾಜನ ಕೋಣೆಯಲ್ಲಿ ಬರಿದಾದ ಕೆಂಪು ಗ್ರ್ಯಾನೈಟ್ ಶಿಲೆಯ ಶವ ತೊಟ್ಟಿಯಿದೆ. ಕೋಣೆಯ ಮೇಲೆ ಗ್ರ್ಯಾನೈಟ್ ಚಪ್ಪಡಿಗಳಿಂದ ಪ್ರತ್ಯೇಕಿಸಲ್ಪಟ್ಟ 5 ಅಂತಸ್ತುಗಳಿವೆ. ಬಹುಶಃ ಬೃಹತ್ ಪಿರಮಿಡ್ಡಿನ ಅಗ್ರಭಾಗದ ಭಾರವನ್ನು ವಹಿಸಲು ಇಂಥ ಖಾಲಿ ಅಂತಸ್ತುಗಳನ್ನು ನಿರ್ಮಿಸಿರಬಹುದು. ಪಿರಮಿಡ್ಡಿನ ಸುತ್ತಲೂ ಹೊರವಲಯದಲ್ಲಿ ಅನೇಕ ಸಣ್ಣಪುಟ್ಟ ಕಟ್ಟಡಗಳಿವೆ. ಅವುಗಳ ಸುತ್ತಲೂ ಎತ್ತರವಾದ ಪ್ರಾಕಾರವಿತ್ತು. ಅದು ಈಗ ಜೀರ್ಣಾವಸ್ಥೆಗೆ ಬಂದಿದೆ. ಪ್ರಾಕಾರದ ಪೂರ್ವಭಾಗದಲ್ಲಿ ಶವಮಂದಿರವಿದ್ದು ಅಲ್ಲಿ ಬಹುಶಃ ಬಲಿ ನಿವೇದನೆ ಮಾಡುತ್ತಿದ್ದಿರಬಹುದು. ಅದರಿಂದ ನದಿದಂಡೆಗೆ ಹೋಗುವ ಆವೃತ ಮಾರ್ಗವಿದೆ. ಆವೃತಮಾರ್ಗದ ತುದಿಯಲ್ಲಿದ್ದಿರಬಹುದಾದ ಬಲಿಮಂಟಪ ಈಗ ಕಾಣದಾಗಿದೆ. ಪಿರಮಿಡ್ಡಿನ ಈ ಪ್ರವೇಶಮಾರ್ಗದ ಬಾಯನ್ನು ಭಾರವಾದ ಆದರೆ, ನಿಖರವಾಗಿ ಹೊಂದುವ ಕಲ್ಲಿನ ದಿಮ್ಮಿಯಿಂದ ಮುಚ್ಚಲಾಗಿತ್ತು. ಬಾಗಿಲಿನ ಸ್ಥಳ ಗೊತ್ತಾಗದಂತೆ ಕಟ್ಟಡದ ಇಡೀ ಹೊರಮೈಯನ್ನು ಚಪ್ಪಡಿಗಳಿಂದ ಆವರಿಸಲಾಗಿತ್ತು. ಎಲ್ಲ ಪಿರಮಿಡ್ಡುಗಳಿಗೂ ಇದು ಸಾಧಾರಣ ಅಂಶವಾಗಿದ್ದರೂ ಭಗ್ನಾವಸ್ಥೆಯಲ್ಲಿರುವ ಪಿರಮಿಡ್ಡುಗಳಲ್ಲಿ ಮೇಲುಹೊದಿಕೆಗಳ ಚಪ್ಪಡಿಗಳನ್ನು 16-17 ನೆಯ ಶತಮಾನದಲ್ಲಿ ಕೈರೋ ನಗರ ನಿರ್ಮಾಣಕಾರ್ಯಕ್ಕಾಗಿ ಲೂಟಿ ಮಾಡಿಕೊಂಡು ಹೋಗಲಾಗಿದೆ. ಖಾಫ್ರೆಯ ಪಿರಮಿಡ್ಡು ಕುಫುವಿನ ಪಿರಮಿಡ್ಡಿಗಿಂತಲೂ ಸ್ವಲ್ಪ ಸಣ್ಣ ಪ್ರಮಾಣದ್ದಾಗಿದೆ. ಆದರೆ, ಉದ್ದಗಲ 707 ಅಡಿ, ಎತ್ತು 471 ಅಡಿ; ಆದರೆ, ಕುಫುವಿನ ಪಿರಮಿಡ್ಡಿಗಿಂತಲೂ ಎತ್ತರಸ್ಥಾನದಲ್ಲಿರುವುದರಿಂದ ದೊಡ್ಡದಾಗಿ ಕಾಣುತ್ತದೆ. ಅನಂತರ ಅರಸನಾದ ಮೆಂಕುರೆಯ ಪಿರಮಿಡ್ಡು ಕುಫುವಿನ ಪಿರಮಿಡ್ಡಿನಲ್ಲಿ ಅರ್ಧದಷ್ಟು ಮಾತ್ರ ದೊಡ್ಡದಾಗಿದೆ. ಅವುಗಳ ಹಿಂಭಾಗದಲ್ಲಿ ಶ್ರೀಮಂತ ವರ್ಗದವರ ಮಸ್ತಾಬ ಗೋರಿಗಳು ಸಾಲುಸಾಲಾಗಿವೆ. ಅರಸರ ಅಧಿಕಾರಿಗಳೂ ಸೇವಕರೂ ಆಗಿದ್ದವರ ಸಮಾಧಿಗಾಗಿ ಈ ಮಸ್ತಾಬಗಳು.

ಐದನೆಯ ರಾಜವಂಶದ ಅರಸರು (ಕ್ರಿ.ಪೂ. 2560-2420) ಸಕ್ಕಾರಾ ಮತ್ತು ಗೀಜಾóಗಳ ನಡುವೆ ಇರುವ ಅಬೂಷಿರ್ ಎಂಬಲ್ಲಿ ತಮ್ಮ ಪಿರಮಿಡ್ಡುಗಳನ್ನು ನಿರ್ಮಿಸಿದ್ದಾರೆ. ಆರನೆಯ ರಾಜವಂಶದವರು (ಕ್ರಿ.ಪೂ. 2420-2294) ಸಕ್ಕಾರಾದಲ್ಲಿ ತಮ್ಮ ಪೂರ್ವಜರ ಸಮಾಧಿಗಳ ಬಳಿ ತಮ್ಮ ಪಿರಮಿಡ್ಡುಗಳನ್ನು ನಿರ್ಮಿಸಿದ್ದಾರೆ. ನಾಲ್ಕನೆಯ ರಾಜವಂಶ ಕಾಲದ ಪಿರಮಿಡ್ಡುಗಳೊಂದಿಗೆ ಹೋಲಿಸಿದರೆ ಸಣ್ಣವು ತಾಂತ್ರಿಕವಾಗಿ ಕೆಳಮಟ್ಟದವೂ ಆಗಿದ್ದರೂ ಐತಿಹಾಸಿಕವಾಗಿ ಇವು ಮಹತ್ತ್ವಪೂರ್ಣವಾದವು. ಅವುಗಳ ಒಳಕೋಣೆಗಳ ಗೋಡೆಗಳಲ್ಲಿ ಈಜಿಪ್ಟಿನ ಜನರ ಮರಣೋತ್ತರ ಜೀವನದ ಬಗೆಗಿನ ನಂಬಿಕೆ ಆಚಾರಗಳ ಮೇಲೆ ಬೆಳಕು ಚೆಲ್ಲುವ ವಿಷಯಗಳನ್ನು ಶಾಸನಗಳ ರೂಪದಲ್ಲಿ ಕೊರೆಯಲಾಗಿದೆ.
ಈಜಿಪ್ಟಿನ ಇತಿಹಾಸದಲ್ಲಿ ಮೊದಲ ಅಂಧಕಾರ ಯುಗದಲ್ಲಿ (ಕ್ರಿ.ಪೂ. 2294-2132) ಪ್ರಮುಖ ಕಟ್ಟಡಗಳ ನಿರ್ಮಾಣವೇನು ಆಗಲಿಲ್ಲ. 11ನೆಯ ರಾಜವಂಶ ಯುಗದಲ್ಲಿ (ಕ್ರಿ.ಪೂ. 2132-2000) ತೀಬ್ಸ್ ನಗರವನ್ನು ರಾಜಧಾನಿಯಾಗಿ ಮಾಡಿಕೊಂಡ ಅರಸರು ಲುಕ್ಸಾರ್ ಬಳಿ ನೈಲ್ ನದಿ ದಂಡೆಯಲ್ಲಿ ಕಟ್ಟಿಸಿದ ಡಯರ್ ಎಲ್ ಬಾಹ್ರಿಯ ದೇವಾಲಯದ ಮೇಲೆ ಪಿರಮಿಡ್ಡನ್ನು ಕಟ್ಟಿಸಿದರು. 12 ನೆಯ ರಾಜವಂಶದ ಕಾಲದಲ್ಲಿ (ಕ್ರಿ.ಪೂ. 2000-1777) ಪಿರಮಿಡ್ಡುಗಳ ನಿರ್ಮಾಣ ಕಾರ್ಯ ಮತ್ತೆ ಭರದಿಂದ ಸಾಗಿತು. 1 ನೆಯ ಅಮೆನಮ್ ಹಟ್ ಮತ್ತು 1 ನೆಯ ಸೆನುಸ್ರೆಟ್ ದೊರೆಗಳ ಪಿರಮಿಡ್ಡುಗಳನ್ನು ದೂಷ್ಷರ್ ಬಳಿಯ ಲಿಫ್ಟ್ ಎಂಬಲ್ಲಿ ಕಾಣಬಹುದಾಗಿದೆ. ಅವು ಕುಫು-ಖಾಫ್ರೆ ಪಿರಮಿಡ್ಡುಗಳಷ್ಟು ದೊಡ್ಡವೂ ಭವ್ಯವೂ ಆಗಿಲ್ಲದಿದ್ದರೂ ಗಮನಾರ್ಹವಾಗಿವೆ. ಅವುಗಳೊಳಗಿನ ಸುರಂಗ ಮಾರ್ಗಗಳು ಬಹಳ ಕ್ಲಿಷ್ಟವಾಗಿದ್ದು ಸಮಾಧಿಘಾತುಕರಿಂದ ಪಿರಮಿಡ್ಡುಗಳ ಸಂಪತ್ತನ್ನು ರಕ್ಷಿಸಲು ಉಪಯುಕ್ತವಾಗಿವೆ.

ಮಧ್ಯಯುಗದ ಪಿರಮಿಡ್ಡುಗಳು ಬಹಳಷ್ಟು ಹಾಳಾಗಿವೆ. ಅದಕ್ಕೆ ಪ್ರಮುಖ ಕಾರಣವೆಂದರೆ ಅವನ್ನು ಒಣಗಿದ ಇಟ್ಟಿಗೆಗಳಿಂದ ಕಟ್ಟಿ ಹೊರಮೈಗೆ ಸುಣ್ಣಕಲ್ಲಿನ ಚಪ್ಪಡಿಗಳ ಹೊದಿಕೆಯನ್ನು ಹೊದಿಸಿದ್ದು ಆಧುನಿಕರು ಈ ಚಪ್ಪಡಿಗಳನ್ನು ತೆಗೆದುಕೊಂಡು ಹೋದ ಅನಂತರ ಇಟ್ಟಿಗೆಗಳು ಮಳೆಗಾಳಿಗಳ ಹೊಡೆತಕ್ಕೆ ಸಿಕ್ಕಿ ನೆಲಸಮವಾಗತೊಡಗಿದವು. 
ಮಧ್ಯಯುಗದ ಅನಂತರ (ಕ್ರಿ.ಪೂ.ಸು. 1700) ಮತ್ತೆ 18 ನೆಯ ರಾಜಮನೆತನದ ಅರಸರು (ಕ್ರಿ.ಪೂ. 1573-1350) ಪಿರಮಿಡ್ಡುಗಳ ಬದಲು ಪರ್ವತಗರ್ಭದಲ್ಲಿ ಕೊರೆದ ರಹಸ್ಯ ಸಮಾಧಿ ಕೋಣೆಗಳಲ್ಲಿ ಮೃತದೇಹವನ್ನು ಹುಗಿಯುತ್ತಿದ್ದರು. ಈ ರಾಜವಂಶದ 1 ನೆಯ ಅಹಮೋಸನ ಹುಸಿ ಪಿರಮಿಡ್ಡು ಹಿಂದಿನ ಪದ್ಧತಿಯ ಸ್ಮಾರಕವೆನ್ನಬಹುದಾಗಿದೆ. 23 ನೆಯ ರಾಜವಂಶದ ಪಿಯಾಂಖಿ ದೊರೆಯ ಕಾಲದಲ್ಲಿ ಪ್ರಾಚೀನ ಸಾಂಸ್ಕøತಿಕ ಮತ್ತು ಮತೀಯ ಆಚಾರ ಪದ್ಧತಿಗಳನ್ನು ಪುನರುಜ್ಜೀವನಗೊಳಿಸಿದಾಗ ಪಿರಮಿಡ್ಡುಗಳ ನಿರ್ಮಾಣ ಮತ್ತೆ ರೂಢಿಗೆ ಬಂತು. ಇಂಥ ಅನೇಕ ಪಿರಮಿಡ್ಡುಗಳನ್ನು ಅಬಿಡಾಸ್ ಪ್ರದೇಶದಲ್ಲಿ ಕಾಣಬಹುದು.

ಪಿರಮಿಡ್ಡುಗಳು ಮುಖ್ಯವಾಗಿ ರಾಜರ ರಾಜವಂಶೀಯರ ಸಮಾಧಿಗಳು. ಈಜಿಪ್ಟಿನ ಮತೀಯ ನಂಬಿಕೆಗನುಸಾರವಾಗಿ ರಾಜ ಭೂಮಿಗಿಳಿದು ಬಂದು ಪ್ರಜಾರಕ್ಷಣೆ ಮಾಡುತ್ತಿದ್ದ ಸಾಕ್ಷಾತ್ ದೇವರು. ಮತ್ತೊಂದು ನಂಬಿಕೆಗನುಗುಣವಾಗಿ ಅವರ ಪ್ರೇತ ಲೋಕದ ಅಧಿಪತಿಯಾದ ಓಸಿರಿಸ್ ರಾಜನಾಗಿ ಭೂಮಿಗೆ ಬರುತ್ತಿದ್ದ. ಅವನು ಮತ್ತೆ ಸಾವಿನ ರೂಪದಲ್ಲಿ ಪ್ರೇತಲೋಕಕ್ಕೆ ಹೋದಾಗ ಅವನ ಮರಣೋತ್ತರ ಜೀವನದ ಸೌಕರ್ಯಕ್ಕಾಗಿ ಅವನ ಘನತೆಗೆ ತಕ್ಕುದಾದ ಅರಮನೆ, ದಾಸ-ದಾಸಿಯರು, ಆಹಾರ ಪಾನೀಯಗಳು ಮುಂತಾದ ಸಕಲ ಸೌಲಭ್ಯಗಳನ್ನು ರಾಜನ ಜೀವಿತ ಕಾಲದಲ್ಲಿಯೇ ನಿರ್ಮಿಸಿ ಕೊಡಲಾಗುತ್ತಿತ್ತು. ಅಪಾರ ಐಶ್ವರ್ಯದ ಆಸೆಯಿಂದ ಅಂಥ ರಾಜರ ಸಮಾಧಿಗಳನ್ನು ಅತಿ ಪ್ರಾಚೀನ ಕಾಲದಿಂದಲೂ ಕಳ್ಳರು ಲೂಟಿ ಮಾಡುತ್ತಿದ್ದರು. ಆದುದರಿಂದ ಬಹಳ ಶ್ರಮದಿಂದ ಅಭೇದ್ಯವಾಗಿರಲೆಂದು ಪಿರಮಿಡ್ಡುಗಳನ್ನು ಅಪಾರ ವೆಚ್ಚದಿಂದ ನಿರ್ಮಿಸಲಾಗುತ್ತಿತ್ತು. ಅವುಗಳ ಪ್ರವೇಶ ಮಾರ್ಗಗಳನ್ನು ಜನರ ಕಣ್ಣಿಗೆ ಬೀಳದಂತೆ ದೊಡ್ಡ ಶಿಲಾದಿಮ್ಮಿಗಳಿಂದ ಮುಚ್ಚಿ ಅವುಗಳ ಮೇಲೆ ಹಾಸುಗಲ್ಲುಗಳನ್ನು ಹೊದ್ದಿಸಿ ಮರೆ ಮಾಡಲಾಗುತ್ತಿತ್ತು. ಒಳಗಿನ ಪ್ರವೇಶ ಮಾರ್ಗಗಳನ್ನು ಬಹಳ ಕ್ಲಿಷ್ಟವಾದ ಯೋಜನೆಯಿಂದ ನಿರ್ಮಿಸಲಾಗುತ್ತಿತ್ತು. ಅಷ್ಟಾದರೂ ಅವುಗಳು ಸುರಕ್ಷಿತವಾಗಿರಲಿಲ್ಲ. ಆದುದರಿಂದಲೇ ಸಾಮ್ರಾಜ್ಯ ಯುಗದ ಚಕ್ರವರ್ತಿಗಳು ತಮ್ಮ ಸಮಾಧಿಗಳನ್ನು ದುರ್ಗಮವಾದ ಮರಳುಗಾಡಿನ ಆಚೆಯ ಭಾಗದಲ್ಲಿ ಅನೂಹ್ಯ ಪರ್ವತ ಗರ್ಭಗಳಲ್ಲಿ ಕೊರೆದ ರಹಸ್ಯ ಕೋಣೆಗಳಲ್ಲಿ ನಿರ್ಮಿಸುತ್ತಿದ್ದರು. ಆದರೂ ಅವು ಸುರಕ್ಷಿತವಾಗಿರಲಿಲ್ಲ. ಕ್ರಿ. ಪೂ. 13 ನೆಯ ಶತಮಾನದ ಚಕ್ರವರ್ತಿ ಹಿಮ್ಮಡಿ ರಾಮ್ಸೆಸ್ ಸಮಾಧಿ ಕಳ್ಳರ ಪತ್ತೆ ಹಚ್ಚಿ ಅವರ ವಿಚಾರಣೆ ಮಾಡುವುದಕ್ಕಾಗಿ ಒಂದು ಆಯೋಗವನ್ನು ನಿರ್ಮಿಸಿದ್ದ ವಿಷಯ ಲಿಖಿತ ದಾಖಲೆಗಳಲ್ಲಿ ಕಂಡುಬರುತ್ತದೆ. ಕ್ರಿ. ಪೂ. 5 ನೆಯ ಶತಮಾನದಲ್ಲಿದ್ದ ಹೀರಡಟಸ್ ಸಹ ಸಮಾಧಿ ಕಳ್ಳರ ಗುಂಪುಗಳ ಪ್ರಸ್ತಾಪ ಮಾಡಿದ್ದಾನೆ.
ಪಿರಮಿಡ್ಡುಗಳ ಒಳಕೋಣೆಗಳ ಗೋಡೆಗಳ ಮೇಲೆ, ಆ ಕೋಣೆಯಲ್ಲಿ ಇಟ್ಟಿರುತ್ತಿದ್ದ ಶವ ತೊಟ್ಟಿಗಳ ಕೊರೆದ ಅಥವಾ ಬಣ್ಣಗಳಲ್ಲಿ ಚಿತ್ರಿಸಿದ ಹಲವಾರು ದೃಶ್ಯಗಳು, ಶಾಸನಗಳು ಆ ಕಾಲದ ಸಾಮಾಜಿಕ, ಧಾರ್ಮಿಕ ಜೀವನಗಳನ್ನು ತಿಳಿಯಲು ಬಹಳ ಉಪಯುಕ್ತವಾಗಿವೆ. ರಾಜನ ಅರಮನೆ ವಾಸಿಗಳ ಜೀವನಕ್ಕೆ ಸಂಬಂಧಿಸಿದ ಅನೇಕ ದೃಶ್ಯಗಳನ್ನು ಅಲ್ಲಿ ಚಿತ್ರಿಸಿದ್ದಾರೆ. ಆ ಕಾಲದ ಉಡುಪುಗಳು, ಆಭರಣಗಳು, ನೃತ್ಯ, ವಾದ್ಯ, ಸಂಗೀತಗಾರರ ಗುಂಪುಗಳು, ಧಾರ್ಮಿಕ ವಿಧಿಗಳ ಆಚರಣೆಗಳು ಮೊದಲಾದ ಸಂಗತಿಗಳು ಈ ಚಿತ್ರಗಳಿಂದ ತಿಳಿದುಬರುತ್ತವೆ. ಅಲ್ಲಿರುವ ಬರವಣಿಗೆಗಳಿಂದ ಅನೇಕ ರಾಜಕೀಯ ಸಂಗತಿಗಳು ವಂಶಾವಳಿಯ ವಿವರಗಳು ತಿಳಿದು ಬರುತ್ತವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಆ ಸಮಾಧಿಗಳ ಮೇಲೆ ಬರೆದಿರುವ ಸತ್ತವರಿಗೆ ಸಂಬಂಧಿಸಿದ ಗ್ರಂಥಗಳು ಆ ಜನರ ಧಾರ್ಮಿಕ ಅದರಲ್ಲೂ ಮರಣೋತ್ತರ ಜೀವನಕ್ಕೆ ಸಂಬಂಧಿಸಿದ ವಿವರಗಳನ್ನು ತಿಳಿಯಲು ಬಹಳ ಉಪಯುಕ್ತವಾಗಿವೆ. 

ಮಧ್ಯ ಅಮೆರಿಕದ ಪ್ರದೇಶಗಳಲ್ಲಿ ಕ್ರಿಸ್ತಶಕದ ಆರಂಭದಲ್ಲಿ ವ್ಯವಸಾಯ ಮತ್ತು ಪಶುಸಂಗೋಪನ ವೃತ್ತಿ ಪ್ರಧಾನವಾದ ಗ್ರಾಮೀಣ ಸಂಸ್ಕøತಿಗಳ ಕಾಲದಲ್ಲಿ ಧಾರ್ಮಿಕ ಆಚಾರ-ವಿಚಾರಗಳಿಗೆ ಸಾಧಕವಾಗಿ ಪಿರಮಿಡ್ಡಿನಾಕಾರದ ದಿಬ್ಬ ಅಥವಾ ಹಂತಹಂತವಾದ ಜಗಲಿಗಳನ್ನು ಕಟ್ಟಲಾರಂಭಿಸಿದರು. ಅಂಥ ಪಿರಮಿಡ್ಡುಗಳ ಮೇಲೆ ದೇವಾಲಯಗಳನ್ನು ಕಟ್ಟಲಾಗುತ್ತಿತ್ತು. ದೇವಾಲಯಗಳಿಗೆ ಪ್ರವೇಶಿಸಲು ಮೆಟ್ಟಿಲುಗಳನ್ನು ಪಿರಮಿಡ್ಡುಗಳ ಸುತ್ತ ಅರಸರಿಗೆ ಮತ್ತು ಪುರೋಹಿತರಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತಿತ್ತು. ಹೊರಭಾಗದಿಂದ ನೋಡಲು ಅವು ಮನೋಹರವಾಗಿದ್ದರೂ, ಕಮಾನುಗಳ ಬಳಕೆ ಇಲ್ಲದ ಇಕ್ಕಟ್ಟಾದ ಪ್ರವೇಶ ಮಾರ್ಗಗಳಿಂದ ಕೂಡಿರುತ್ತಿದ್ದ, ಗಾಳಿ ಬೆಳಕುಗಳಿಲ್ಲದ ಕೋಣೆಗಳಿಂದ ಕೂಡಿದ ಒಳಭಾಗ, ಆರ್ಷೇಯವೂ ನಾಜೂಕಿಲ್ಲದವೂ ಆಗಿರುತ್ತಿದ್ದವು. ಎಕ್ವಡಾರ್ ಕರಾವಳಿ ಪ್ರದೇಶದಲ್ಲಿ ಈ ಪಿರಮಿಡ್ಡುಗಳ ಹೊರಭಾಗಕ್ಕೆ ಕಲ್ಲಿನ ಹೊದಿಕೆಗಳನ್ನೊದಗಿಸಲಾಗಿತ್ತು. ಈ ಪ್ರದೇಶದಲ್ಲಿ ಮಾಯಾ ಸಂಸ್ಕøತಿ ಕಾಲದ ಟಿಯೋಟ್‍ಹುಕನ್ ನಗರದ ಸೂರ್ಯ ಮತ್ತು ಚಂದ್ರ ದೇವತೆಗಳ ಪಿರಮಿಡ್ಡುಗಳು ಪ್ರಸಿದ್ಧವಾದುವು. ಸ್ವಲ್ಪ ಕಾಲಾನಂತರ ಮೇಲ್ಭಾಗ ಸಮತಲವಾಗಿದ್ದ ಪಿರಮಿಡ್ಡುಗಳನ್ನು ಆಯಾಕಾರದ ಪ್ರಾಂಗಣದಲ್ಲಿ ನಿರ್ಮಿಸುತ್ತಿದ್ದರು. ಪಿರಮಿಡ್ಡುಗಳ ಮೇಲಿನ ದೇವಾಲಯಗಳನ್ನು ಶಿಲ್ಪಗಳಿಂದ ಅಲಂಕರಿಸಲಾಗುತ್ತಿತ್ತು. ಪೆರು ರಾಜ್ಯದ ಉತ್ತರ ಕರಾವಳಿ ಪ್ರದೇಶದಲ್ಲಿ ಬೃಹದ್ಗಾತ್ರದ ಮೇಲ್ಭಾಗ ಸಮತಟ್ಟಾದ, ಪಿರಮಿಡ್ಡುಗಳನ್ನು ಹಸಿ ಇಟ್ಟಿಗೆಗಳಲ್ಲಿ ಕಟ್ಟಲಾಗುತ್ತಿತ್ತು. ವಿರುಕೊಳ್ಳದಲ್ಲಿರುವ ಗ್ಯಾಲಿನಾಜೋ ಪಿರಮಿಡ್ಡು ಒಂದು ಧಾರ್ಮಿಕ ಕೇಂದ್ರವಾಗಿತ್ತು. ಅದರ ಸುತ್ತ ಮುತ್ತ ಹಸಿ ಇಟ್ಟಿಗೆಗಳಿಂದ ಕಟ್ಟಿದ 20,000 ಕೋಣೆಗಳಿದ್ದವು. ದೊಡ್ಡ ಕೋಣೆಗಳೂ, ಪ್ರಾಂಗಣಗಳು ಮತ್ತು ಮೊಗಸಾಲೆಗಳನ್ನು ಒಳಗೊಂಡ ಬೃಹತ್ ಪ್ರಮಾಣದ ಕಟ್ಟಡಗಳನ್ನು ಪಿರಮಿಡ್ಡುಗಳ ಬಳಿ ಕಟ್ಟಲಾಗಿತ್ತು. ಕ್ರಮೇಣ ಕ್ರಿ.ಶ. 900 ರ ಸುಮಾರಿಗೆ ಪೆರು ಮತ್ತು ಮಧ್ಯ ಅಮೆರಿಕ ಪ್ರದೇಶಗಳಲ್ಲಿ ಪಿರಮಿಡ್ಡು ನಿರ್ಮಾಣ ಕಾರ್ಯ ಸ್ಥಗಿತಗೊಳ್ಳಲಾರಂಭಿಸಿತು. ಆದಾಗ್ಯೂ ನಗರ-ಸಂಸ್ಕøತಿ ಬೆಳೆಯಲಾರಂಭಿಸಿದಾಗ ಪಿರಮಿಡ್ಡುಗಳ ಅರಮನೆಗಳ ಸುತ್ತ ದೊಡ್ಡ ನಗರಗಳು ಹುಟ್ಟಿಕೊಂಡವು. ಪೆರು ಪ್ರದೇಶದಲ್ಲಿ ಕ್ರಿ. ಶ. 1000-1532 ರ ನಡುವೆ ಇಂಕಾ ಸಂಸ್ಕøತಿ ಪ್ರಬಲವಾಯಿತು. ಆ ಕಾಲದಲ್ಲಿ ಸುಯೋಜಿತ ನಗರ ಯೋಜನೆ ಬಳಕೆಗೆ ಬಂತು. ಬಹಳ ವಿಸ್ತಾರವಾದ ವಾಸ್ತು ನಿರ್ಮಾಣಗಳ ಮಧ್ಯೆ ಪಿರಮಿಡ್ಡುಗಳನ್ನು ಸಣ್ಣ ಗಾತ್ರದಲ್ಲಿ ನಿರ್ಮಿಸುತ್ತಿದ್ದುದರಿಂದ ಅವುಗಳ ಪ್ರಾಧಾನ್ಯ ಕಡಿಮೆಯಾಯಿತು.								(ಬಿ.ಕೆ.ಜಿ.; ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ